ಕನ್ನಡ ನಾಡು | Kannada Naadu

ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ  ಸಾಹಿತಿ ಬಾನು ಮುಷ್ತಾಕ್ ಅವರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

22 May, 2025

 

ಬೆಂಗಳೂರು: ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾನವಾಗಿರುವ ಖ್ಯಾತ ಸಾಹಿತಿ ಮತ್ತು ಪತ್ರಕರ್ತೆ ಬಾನುಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಅಭಿನಂದಿಸಿದೆ.

ಸಣ್ಣ ಕಥೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ (ಹೃದಯ ದೀಪ)ಕೃತಿ ಅಂತಿಮ ಸುತ್ತಿಗೆ ಆಯ್ಕೆಯಾದ ಸಂದರ್ಭದಲ್ಲಿಯೇ
ಹಾಸನದಲ್ಲಿ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಶುಭ ಕೋರಿದ್ದನ್ನು ನೆನಪಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಲಂಡನ್ ನಲ್ಲಿ ಬುಕರ್ ಪ್ರಶಸ್ತಿ ಘೋಷಣೆ ಮಾಡಿದ ಕ್ಷಣ, ಕನ್ನಡಿಗರ ಪಾಲಿಗೆ ಹೆಮ್ಮೆಯ ಅಮೃತ ಘಳಿಗೆಯಾಗಿದೆ ಎಂದು ಶ್ಲಾಘಿಸಿದ್ದಾರೆ.

ಹಾಸನದಿಂದ ಪಿ.ಲಂಕೇಶ್ ಪತ್ರಿಕೆಗೆ ವರದಿಗಾರರಾಗಿದ್ದ ಭಾನುಮುಷ್ತಾಕ್ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು. ವಕೀಲರಾಗಿ, ನಗರಸಭೆ ಸದಸ್ಯರಾಗಿ ಹಾಗೂ ಪ್ರಗತಿಪರ ಸಾಹಿತಿಯಾಗಿ ಗುರುತಿಸಿಕೊಂಡವರು. ಅನ್ಯಾಯದ ವಿರುದ್ದ ಧ್ವನಿ ಎತ್ತಿದವರು. ಸಂಘ ಸಂಸ್ಥೆಗಳಲ್ಲಿ ಸಂಘಟಕಿಯಾಗಿಯೂ ಕೆಲಸ ಮಾಡಿದವರು. ಅವರ ಹೃದಯ ದೀಪ ಕೃತಿ ಬುಕರ್ ಪ್ರಶಸ್ತಿಯನ್ನು ಗೆದ್ದಿರುವುದು ಕನ್ನಡಿಗರ ಹೃದಯ ಗೆದ್ದಂತಾಗಿದೆ. ಹೃದಯ ದೀಪ, ಕನ್ನಡದ ದೀಪವಾಗಿ ಜಗದೆಲ್ಲೆಡೆ ಪ್ರಜ್ವಲಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.

ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ ಹಸೀನಾ ಚಲನಚಿತ್ರ ಕಥೆ ಕೂಡ ಬಾನುಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳಿಂದಲೇ ಆಯ್ಕೆ ಮಾಡಿದ್ದು. ಹಸೀನಾ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಇಡೀ ತಂಡವನ್ನು ಹಾಸನಕ್ಕೆ ಆಹ್ವಾನಿಸಿದ್ದ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕಲಾಭವನದಲ್ಲಿ ಏರ್ಪಡಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಿತ್ತು. ಕೆಲ ಘಟನೆಗಳ ಸಂಕಷ್ಟದ ಸಂದರ್ಭದಲ್ಲಿಯೂ ಬಾನುಮುಷ್ತಾಕ್ ಅವರ ಜೊತೆಗೆ ಬೆಂಬಲವಾಗಿ ನಿಂತಿದ್ದು ಮರೆಯಲಾಗದ ಕ್ಷಣ ಎನ್ನುವುದನ್ನು ಶಿವಾನಂದ ತಗಡೂರು ಅವರು ಸ್ಮರಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by